ರಾಜಾರಾಮ ಛತ್ರಪತಿ
 	ಆಳ್ವಿಕೆ 1689-1700. ಛತ್ರಪತಿ ಶಿವಾಜಿಯ ಎರಡನೆಯ ಮಗ. ಇವನದು ಸಾಮಾನ್ಯ ವ್ಯಕ್ತಿತ್ವವಾಗಿದ್ದರೂ ಮೊಗಲರನ್ನು ಧೈರ್ಯವಾಗಿ ಎದುರಿಸಿದ. ಔರಂಗಜೇಬನು ಇವನ ಅಣ್ಣ ಶಂಭೂಜಿಯನ್ನು ಸೆರೆ ಹಿಡಿದು ಕೊಲ್ಲಿಸಿದ ಮತ್ತು ಅವನ ಮಗ ಷಾಹೂವನ್ನು ಸೆರೆಹಿಡಿದ (1689). ಬಳಿಕ ಈತ ಜಿಂಜಿಗೆ ತೆರಳಿ ಅಲ್ಲಿಂದ ಮೊಗಲರ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ. ಸಿಂಹಾಸನಕ್ಕೆ ಹಕ್ಕುದಾರನಾದ ಇವನ ಅಣ್ಣ ಶಂಭೂಜಿಯ ಮಗ ರಾಹುಲ್ ಬಾಲಕ ಮತ್ತು ಆಳಲು ಅಸಮರ್ಥನೆಂದು ಭಾವಿಸಿದ ಮರಾಠ ಸರದಾರರು ರಾಜಾರಾಮನನ್ನು ಛತ್ರಪತಿಯೆಂದು ಘೋಷಿಸಿ ರಾಯಘಡದಲ್ಲಿ ಪಟ್ಟಾಭಿಷೇಕ ಮಾಡಿದರು.
  	ರಾಜಾರಾಮ ಸೈನಿಕರ ವೇತನಕ್ಕೆ ಬದಲಾಗಿ ಭೂಮಿಯನ್ನು ಕೊಟ್ಟುದಲ್ಲದೆ ಶತ್ರುಗಳಿಂದ ವಶಪಡಿಸಿಕೊಂಡ ಪ್ರದೇಶಗಳನ್ನು ಸೈನಿಕರಿಗೆ ಹಂಚಿಕೊಡುತ್ತಿದ್ದ. ಈ ಬಗೆಯಲ್ಲಿ ಜಮೀನ್ದಾರಿ ಪದ್ಧತಿ ರೂಢಿಗೆ ಬಂದು ಕ್ರಮೇಣ ಸಿಂಧಿಯ, ಹೋಳ್ಕರ್ ಇಂಥ ಶ್ರೀಮಂತ ಮನೆತನಗಳ ಉಗಮವಾಯಿತು.
  	ರಾಜಾರಾಮ ಶಾಂತಾಜಿ ಘೋರ್ಪಡೆಯನ್ನು ಮೋಸದಿಂದ ಕೊಲ್ಲಿಸಿದಾಗ ಸರದಾರರ ಬೆಂಬಲ ಕಳೆದುಕೊಳ್ಳುವಂತಾಯಿತು. ಈ ಅತೃಪ್ತಿಯ ಪ್ರಯೋಜನ ಪಡೆದ ಮೊಗಲರು ಜಿಂಜಿಯನ್ನು ವಶಪಡಿಸಿಕೊಂಡರು. ಅಲ್ಲಿಂದ ತಪ್ಪಿಸಿಕೊಂಡು ಓಡಿದ ಈತ ಸಾತಾರ ಮತ್ತು ಕೊಂಕಣ ಪ್ರದೇಶಗಳಲ್ಲಿ ಹೋದ. ಖಾನ್‍ದೇಶ, ಬಿಹಾರ್‍ಗಳನ್ನು ವಶಪಡಿಸಿಕೊಳ್ಳುವ ಪ್ರಯತ್ನದಲ್ಲಿದ್ದಾಗ 1700 ರಲ್ಲಿ ಆಕಸ್ಮಿಕ ಸಾವನ್ನಪ್ಪಿದ. ಈತ ಸತ್ವಹೀನ ರಾಜನಾಗಿದ್ದರೂ ಮರಾಠರನ್ನು ಒಗ್ಗೂಡಿಸಲು ಕಾರಣನಾದವನೆಂದೂ ಮರಾಠ ಇತಿಹಾಸಕಾರರು ಅಭಿಪ್ರಾಯ ಪಡುತ್ತಾರೆ.									    
  (ಎಂ.ಎಸ್.ಯು.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ